ಬೆಲ್, ಅಲೆಗ್ಸಾಂಡರ್ ಗ್ರಹಾಮ್
1847-1922. ದೂರವಾಣಿ ಉಪಜ್ಞೆಕಾರ. ಸ್ಸಾಟ್ಲೆಂಡಿನಲ್ಲಿ ಜನನ 3-31847. ಆಮೆರಿಕದ ನೊವಾಸ್ಕೊಶಿಯಾದಲ್ಲಿ ಮರಣ 2-8-1922. ವಾಗ್ವಿಜ್ಞಾನದ ಬಗ್ಗೆ ಪರಂಪರಾನುಗತ ಆಸಕ್ತಿ ತಳೆದಿದ್ದ ವಂಶದಲ್ಲಿ ಜನಿಸಿದ ಬೆಲ್ ತನ್ನ ತಂದೆಯಿಂದ ಆ ವಿಜ್ಞಾನಕ್ಕೆ ಪ್ರವೇಶ ಪಡೆದು ಕಿವುಡರಿಗೆ ಮಾತು ಕಲಿಸುವುದರಲ್ಲಿ ಪರಿಣತಿ ಗಳಿಸಿದ. 1870ರಲ್ಲಿ ಈ ಕುಟುಂಬ ಕೆನಡಾಕ್ಕೆ ವಸಲೆ ಹೋಗಿ ಮರು ವರ್ಷ ಅಮೆರಿಕ ಸಂಯುಕ್ತ ಸಂಸ್ಥಾನದಲ್ಲಿ ನೆಲೆಸಿತು. 1873ರಲ್ಲಿ ಬೆಲ್ ಬಾಸ್ಟನ್ ವಿಶ್ವವಿದ್ಯಾಲಯದಲ್ಲಿ ವಾಕ್ ಶರೀರ ವಿಜ್ಞಾನದ (ವೋಕಲ್ ಫಿಜಿಯಾಲಜಿ) ಪ್ರಾಧ್ಯಾಪಕನಾಗಿ ನೇಮಕಗೊಂಡ. ಅಲ್ಲಿಯ ಕಿವುಡಿ ವಿದ್ಯಾರ್ಥಿನಿಯೊಬ್ಬಳಲ್ಲಿ ಅನುರಕ್ತನಾದ ಈತ ಹೇಗಾದರೂ ಆಕೆಗೆ ವಾಗ್ಸೂತ್ರಗಳನ್ನು ಬೋಧಿಸಲೇ ಬೇಕು ಎಂಬ ಹಠದಿಂದ ಪ್ರೇರಿತನಾಗಿ ತನ್ನ ಅಧ್ಯಯನವನ್ನು ಅತಿ ತೀವ್ರಗತಿಯಲ್ಲಿ ಮುಂದುವರಿಸಿದ. 

	ಶಬ್ದದ ಯಾಂತ್ರಿಕೋತ್ಪಾದನೆಯಲ್ಲಿ ಆಸಕ್ತಿ ತಳೆದು ಸಂಬಂಧಿಸಿದ ಸಿದ್ಧಾಂತಗಳನ್ನು ಕೂಲಂಕಷವಾಗಿ ಅಭ್ಯಸಿಸಿದ. ಶಬ್ದ ತರಂಗದ ಕಂಪನಗಳನ್ನು ಏರಿಳಿಯುವ ವಿದ್ಯುತ್ಪ್ರವಾಹವಾಗಿ ಪರಿವರ್ತಿಸುವುದು ಸಾಧ್ಯವಾದರೆ ಈ ಪ್ರವಾಹವನ್ನು ಇದರ ಕೊನೆಯಲ್ಲಿ ಪುನಃ ಪರಿವರ್ತಿಸಿ ಮೂಲಶಬ್ದದ ತತ್ಪ್ರತಿಯನ್ನು ಉತ್ಪಾದಿಸುವುದು ಕೈಗೂಡ ಬೇಕೆಂದು ತರ್ಕಿಸಿದ. ಈ ತೆರನಾಗಿ ಶಬ್ದವನ್ನು ತಂತಿಗಳ ಮೂಲಕ ಒಂದೆಡೆಯಿಂದ ಇನ್ನೊಂದೆಡೆಗೆ ವಿದ್ಯುದ್ವೇಗದಿಂದ ಪ್ರೇಷಿಸುವುದು (ಟ್ರಾನ್‍ಸ್ಮಿಟ್) ಸಾಧ್ಯವಾದೀತೆಂಬ ಕನಸು ಕಂಡ. 

	ಬೆಲ್ ಮತ್ತು ಅವನ ಸಹಾಯಕ ವಾಟ್ಸನ್ ಈ ಸಂಬಂಧವಾದ ಪ್ರಯೋಗದಲ್ಲಿ ನಿರತರಾಗಿದ್ದರು-ಯಜಮಾನ ತನ್ನ ಕೊಠಡಿಯಲ್ಲಿ, ಸಹಾಯಕ ಮೇಲುಪ್ಪರಿಗೆಯ ಇನ್ನೊಂದು ಕೊಠಡಿಯಲ್ಲಿ. ಆಗೊಂದು ಆಕಸ್ಮಿಕ ಅಪಘಾತ ಘಟಿಸಿತು. ವಿದ್ಯುತ್ಕೋಶದ ಆಮ್ಲ ಬೆಲ್‍ನ ಶರಾಯಿ ಮೇಲೆ ಚೆಲ್ಲಿಹೋಯಿತು. ಕೂಡಲೇ ಕಿರುಚಿದ `ವಾಟ್ಸನ್! ದಯವಿಟ್ಟು ಇಲ್ಲಿ ಬಾ. ನನಗೆ ನಿನ್ನ ಸಹಾಯ ಬೇಕು. ವಾಟ್ಸನ್ ತನ್ನಲ್ಲಿದ್ದ ಉಪಕರಣದಲ್ಲಿ ಈ ಮಾತುಗಳನ್ನು ಯಥಾವತ್ತಾಗಿ ಬಿತ್ತರಿಸಿದುದನ್ನು ಕೇಳಿ ಪುಳಕಿತಕಾಯನಾಗಿ ಒಡನೆ ಬೆಲ್ ಇದ್ದಲ್ಲಿಗೆ ಧಾವಿಸಿ ಬಂದ. ಮೊದಲ ದೂರವಾಣಿ ಕರೆ ಫಲಿಸಿತ್ತು. 

	1876ರಲ್ಲಿ ಬೆಲ್ ದೂರವಾಣಿ ಉಪಕರಣದ ಏಕಸ್ವ ಪಡೆದ. 

	1915ರೆಲ್ಲಿ ಮೊದಲ ಖಂಡಾಂತರ ದೂರವಾಣಿಯನ್ನು ಕಾರ್ಯ ಪ್ರವೃತ್ತಗೊಳಿಸಿದಾಗ ಅಮೆರಿಕ ಪೂರ್ವ ಕರಾವಳಿಯಲ್ಲಿದ್ದ ಬೆಲ್ ಆತನಿಂದ ಅತಿದೂರದ ಪಶ್ಚಿಮ ಕರಾವಳಿಯಲ್ಲಿದ್ದ ವಾಟ್ಸನ್‍ನಿಗೆ ಕರೆ ನೀಡಿದ `ವಾಟ್ಸನ್! ದಯವಿಟ್ಟು ಇಲ್ಲಿ ಬಾ. ನನಗೆ ನಿನ್ನ ಸಹಾಯಬೇಕು ಇದು ಒಂದು ಕೊಠಡಿಯಿಂದ ಇನ್ನೊಂದು ಕೊಠಡಿಗೆ ನೀಡಿದ ಕರೆಯಲ್ಲ. ಬದಲು ಒಂದು ಕರಾವಳಿಯಿಂದ ಇನ್ನೊಂದು ಕರಾವಳಿಗೆ ತಾತ್ಕ್ಷಣಿಕವಾಗಿ ಬಿತ್ತರಗೊಂಡ ದೂರವಾಣಿ ಸಂದೇಶ.

	ಬೆಲ್‍ನ ಹೆಸರು ಹೀಗೆ ದೂರವಾಣಿಯ ಜೊತೆ ಐಕ್ಯವಾಗಿ ಹೋಗಿದೆ. 		

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ